ಬಣ್ಣಗುರುಡುತನ -
ಪ್ರಾಥಮಿಕ ವರ್ಣಗಳನ್ನೂ ಉಪವರ್ಣಗಳನ್ನೂ ಗೊತ್ತುಹಚ್ಚಲಾಗದ ಪರಿಸ್ಥಿತಿ. ಕಲರ್‍ಬ್ಲೈಂಡ್‍ನೆಸ್ ವರ್ಣಾಂಧತೆ ಪರ್ಯಾಯನಾಮ. ಪೂರ್ಣವರ್ಣಾಂಧತೆ (ಅಂದರೆ ಬಿಳಿ ಕರಿ ಬಿಟ್ಟರೆ ಬೇರೆ ಬಣ್ಣಗಳ ಬಗೆಗೆ ಅಂಧತೆ) ಬಹಳ ಅಪರೂಪ. ಬಣ್ಣಗುರುಡರಲ್ಲಿ ಕೆಲಮಟ್ಟಿಗಾದರೂ ಕೆಲವು ಬಣ್ಣಗಳನ್ನು ಗುರುತಿಸುವಷ್ಟು ಸಾಮಥ್ರ್ಯ ಇದ್ದೇ ಇರುತ್ತದೆ. ಬಣ್ಣಗಳನ್ನು ಗುರುತಿಸಲಾಗದವರು ಈ ಮುಂದಿನ ಲಕ್ಷಣಗಳನ್ನು ಪ್ರದರ್ಶಿಸುತ್ತಾರೆ : 1 ಬಣ್ಣಗಳನ್ನು ಗುರುತಿಸಲು ಹೆಚ್ಚುಕಾಲ ತೆಗೆದುಕೊಳ್ಳುವುದು, 2 ಬಣ್ಣದ ಪ್ರದೇಶ ವಿಸ್ತಾರವಾಗಿದ್ದರೆ ಮಾತ್ರ ಬಣ್ಣವನ್ನು ಗುರುತಿಸುವುದು, 3 ಮಾಸಲು ಬಣ್ಣಗಳನ್ನು ಸುಲಭವಾಗಿ ಗುರುತಿಸದಿರುವುದು, 4 ಬಳಲಿರುವಾಗ ಬಣ್ಣಗಳನ್ನು ಸುಲಭವಾಗಿ ಗುರುತಿಸಲಾಗದಿರುವುದು. ಬಣ್ಣಗುರುಡುತನದಲ್ಲಿ ಎರಡು ಬಗೆಯುಂಟು: ಹುಟ್ಟಾ ಬಣ್ಣಗುರುಡುತನ, ಜನನಾಂತರ ದೃಷ್ಟಿಪಟಲದ (ರೆಟಿನ) ರೋಗಗಳಿಂದ ಉಂಟಾಗುವ ಬಣ್ಣಗುರುಡುತನ.

	ಹುಟ್ಟಾ ಬಣ್ಣಗುರುಡುತನ: ಪುರುಷರಲ್ಲಿ ಇದು 3%-4% ವರೆಗೆ ಕಂಡು ಬಂದರೆ ಸ್ತ್ರೀಯರಲ್ಲಿ 0.3% ರಷ್ಟು ಮಾತ್ರ ಕಂಡುಬರುತ್ತದೆ. ಇದು ಆನುವಂಶಿಕವಾಗಿ ಎರಡು ಕಣ್ಣುಗಳನ್ನೂ ಬಾಧಿಸುವುದು. ಇದರ ಕಾರಣ ತಿಳಿದಿಲ್ಲ. ವಾಸಿ ಮಾಡಲಾಗದ ಬಣ್ಣಗುರುಡುತನವಿದು. ಇಂಥವರು ಬಣ್ಣ ತಿಳಿಯುವ ಅಭ್ಯಾಸವನ್ನು ಮೊದಲಿಂದ ಪ್ರಾರಂಭಿಸಿದಲ್ಲಿ ಕೆಲವು ಮಂದಿ ಮಾತ್ರ ಅವನ್ನು ಅರಿಯಲು ಸಾಧ್ಯ. ಮೂರು ಮೂಲಬಣ್ಣಗಳಲ್ಲಿ (ಕೆಂಪು, ಹಸಿರು ಮತ್ತು ನೀಲಿ) ವರ್ಣಾಂಧರು ಒಂದು ಇಲ್ಲವೆ ಎರಡು ಬಣ್ಣಗಳನ್ನು ಗುರುತಿಸಲಾರರು. ಬೆಳಕಿನ ಕಿರಣಗಳಲ್ಲಿ ಅತಿ ದೀರ್ಘ ತರಂಗಗಳು ಕಣ್ಣಿನಲ್ಲಿ ಕೆಂಪು ಬಣ್ಣದ ಅರಿವನ್ನೂ ಅತಿಹ್ರಸ್ವ ತರಂಗಗಳು ನೇರಿಳೆ ಬಣ್ಣದ ಅರಿವನ್ನೂ ಇವೆರಡರ ನಡುವೆ ಇರುವ ತರಂಗಗಳು ಉಳಿದ ಅಂದರೆ ಕಿತ್ತಳೆವರ್ಣ, ಹಳದಿ. ಹಸಿರು ನೀಲಿ ಮತ್ತು ಊದಾಬಣ್ಣಗಳ ಅರಿವನ್ನೂ ಉಂಟುಮಾಡುತ್ತವೆ. ಮೂಲವರ್ಣಗಳನ್ನು ಆಧರಿಸಿ ಬಣ್ಣದ ಅರಿವನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಬಹುದು. 1 ತ್ರಿವರ್ಣಗಳ ಅರಿವು : ಇದು ಎಲ್ಲ ಬಣ್ಣಗಳನ್ನೂ ಸಹಜವಾಗಿ ಗುರುತಿಸುವವರ ಅರಿವು. 2 ತ್ರಿವರ್ಣ ನ್ಯೂನತೆಯುಳ್ಳವರ ಅರಿವು : ಬಣ್ಣಗಳನ್ನು ಗುರುತಿಸುವ ತ್ರಾಣಮೊಟಕಾಗಿರುವಿಕೆ, ಹೀಗಿರುವವರು ಎಲ್ಲ ಬಣ್ಣಗಳನ್ನು ಗುರುತಿಸಬಲ್ಲರಾದರೂ ಕೆಲವು ಬಣ್ಣಗಳನ್ನು ಗುರುತಿಸಲು ಅವು ಹೆಚ್ಚು ತೀಕ್ಷ್ಣವಾಗಿರಬೇಕಾದುದು ಇವರಿಗೆ ಅಗತ್ಯ. ಮೂಲವರ್ಣಗಳ ಆಧಾರದ ಮೇಲೆ ಇವರನ್ನು ಕೆಂಪುರಂಗು ಗುರುತಿಸುವಲ್ಲಿ ನಿರ್ಬಲರೆಂದೂ ಹಸಿರುರಂಗು ಗುರುತಿಸುವಲ್ಲಿ ನಿರ್ಬಲರೆಂದೂ ನೀಲಿರಂಗು ಗುರುತಿಸುವಲ್ಲಿ ನಿರ್ಬಲರೆಂದೂ ನೀಲಿ ನೇರಿಳೆರಂಗು ಗುರುತಿಸುವಲ್ಲಿ ನಿರ್ಬಲರೆಂದೂ ವಿಂಗಡಿಸಬಹುದು. 3 ದ್ವಿವರ್ಣಗಳ ಅರಿವು : ಮೂಲವರ್ಣಗಳಲ್ಲಿ ಎರಡನ್ನು ಮಾತ್ರ ಗುರುತಿಸಬಲ್ಲಂಥ ಸಾಮಥ್ರ್ಯ. 4 ಏಕವರ್ಣದ ಅರಿವು : ಒಂದೇ ಬಣ್ಣವನ್ನು ಗುರುತಿಸುವ ಸಾಮಥ್ರ್ಯ. ಬೆಳಕಿನ ಸಕಲ ಕಿರಣಗಳ ತರಂಗಗಳೂ ಬೂದುಬಣ್ಣವನ್ನು ಹೊಂದಿರುವಂತೆ ಇವರಿಗೆ ಭಾಸವಾಗುತ್ತದೆ.

	ವರ್ಣಾಂಧತೆಯನ್ನು ಕಂಡುಹಿಡಿಯುವ ಸಾಧನಗಳು 1 ಹೋಲಿಕೆ ಮತ್ತು ಭ್ರಮೆ ಉಂಟುಮಾಡುವ ಪ್ರಯೋಗಗಳು : ಇಷಿಹಾರನ ಅಥವಾ ಸ್ಟಿಲಿಂಗನ ಬಣ್ಣಬಣ್ಣದ ಚಿತ್ರಗಳನ್ನೂ ಹೋಮ್‍ಗ್ರೀನನ ಬಣ್ಣಬಣ್ಣಗಳ ಉಣ್ಣೆಯ ಜಡೆಗಳನ್ನೂ ಬಳಸಿ ಪತ್ತೆಮಾಡುವಿಕೆ.

	2 ಎಡ್‍ರಿಡ್ಜ್ ಗ್ರೀನನ ಲಾಂದ್ರ ಪರೀಕ್ಷೆ : ಇದರಲ್ಲಿ ಎರಡು ಬಿಳಿ, ಎರಡು ಕೆಂಪು ಮತ್ತು ಎರಡು ಹಸಿರು ಬಣ್ಣಗಳ ಗಾಜುಗಳನ್ನು ಬಳಸುತ್ತಾರೆ. ಒಂದೇ ಸಮವಾದ ಬೆಳಕಿನ ಕಿರಣಗಳು ಗಾಜಿನ ಮೂಲಕ ಪಸರಿಸಿ ಸನ್ನಿವೇಶದ ವಿವಿಧ ಬಣ್ಣಗಳು ಕಾಣುವಂತೆ ಮಾಡಿರುತ್ತಾರೆ. ಬಣ್ಣ ಗುರುಡುತನ ಗುರುತಿಸಲು ವ್ಯಕ್ತಿಯನ್ನು ಮಸಕಾದ ಬೆಳಕಿರುವ ಕೋಣೆಯಲ್ಲಿ ದೀಪದಿಂದ ಕಿಮೀ ದೂರ ಕೂರಿಸಿ ಕಾಣಿಸುವ ಬಣ್ಣಗಳನ್ನು ವಿವರಿಸುವಂತೆ ಕೇಳಬೇಕು. ಮಂಜು, ಮಳೆ, ಧೂಮ ಸನ್ನಿವೇಶಕ್ಕೆ ತಕ್ಕಂತ ಭ್ರಮೆಗೊಳಿಸುವಂಥ ಗಾಜುಗಳನ್ನು ಕೂಡ ದೀಪದಲ್ಲಿ ಬದಲಿಸಲು ಸಾಧ್ಯವಿದೆ. ವರ್ಣಾಂಧರು ಕೆಂಪನ್ನು ಹಸಿರೆಂದೂ ಹಸಿರನ್ನು ಕೆಂಪೆಂದೂ ಭ್ರಮೆಗೊಳ್ಳುವರು.

	3 ರೋಹಿತ ಪರೀಕ್ಷೆ : ಇದಕ್ಕೆ ಅನಾಮಲೊಸ್ಕೋಪ್ ಯಂತ್ರವನ್ನು ಬಳಸುತ್ತಾರೆ. ಇದರ ಕೆಳಗಿನ ಅರ್ಧ ಹಳದಿಯ ಬಣ್ಣದ ಬೆಳಕನ್ನು ಚೆಲ್ಲುತ್ತದೆ. ವ್ಯಕ್ತಿ ಯಂತ್ರದ ಮೇಲು ಅರ್ಧದಲ್ಲಿ ಕಾಣುವ ಕೆಂಪು ಮತ್ತು ಹಸಿರು ಬಣ್ಣಗಳ ಬೆರಕೆ ವಿಧಾನದಿಂದ ಕೆಳಗಿನ ಅರ್ಧದಲ್ಲಿ ಕಾಣುವ ಹಳದಿ ಬಣ್ಣಕ್ಕೆ ಸರಿಹೊಂದಿಸಬೇಕು.

	4 ಬಣ್ಣ ಗರುಡನಿಗೆ ಬಣ್ಣದ ಚಿತ್ರಗಳನ್ನು ತೋರಿಸಿ ಅವುಗಳಲ್ಲಿರುವಂತೆ ಬಣ್ಣಹಾಕಬೇಕೆಂದು ಹೇಳಿದಾಗ ಬಣ್ಣ ಗುರುಡುತನ ಬೆಳಕಿಗೆ ಸುಲಭವಾಗಿಬರುತ್ತದೆ.

	ಬಣ್ಣದ ಸಂಕೇತಗಳನ್ನು ಬಳಸುವ ಶಾಖೆಗಳು ಅಂದರೆ ರೈಲು, ನೌಕೆ ಮತ್ತು ವಾಯುದಳಗಳು ಬಣ್ಣಗುರುಡರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ. ಬಣ್ಣದ ಸಂಕೇತಗಳನ್ನು ರಸ್ತೆಯಲ್ಲಿ ಚಲಿಸುವ ವಾಹನ ಮತ್ತು ಜನಗಳ ಹತೋಟಿಯಲ್ಲೂ ಬಳಸುವುದರಿಂದ ಬಣ್ಣ ಗುರುಡರಿಗೆ ಓಡಾಡಲು ಕಷ್ಟವೆನಿಸುತ್ತದೆ. ಎಲೆಕ್ಟ್ರಾನಿಕ್ ಖಾತೆಯಲ್ಲೂ ಇವರಿಗೆ ಪ್ರವೇಶವಿರುವುದಿಲ್ಲ. ಹುಟ್ಟಿದ ಮೇಲೆ ಕಾಣಿಸಿಕೊಳ್ಳುವ ವರ್ಣಾಂಧತೆ ದೃಷ್ಟಿನರದ ಮತ್ತು ದೃಷ್ಟಿಪಥದ ರೋಗಗಳು ಈ ಬಗೆಯ ಕುರುಡನ್ನುಂಟುಮಾಡಬಲ್ಲವು. ದೃಷ್ಟಿನರದ ನಶಿಸುವಿಕೆ ಮತ್ತು ತಂಬಾಕು ಮತ್ತು ರಾಸಾಯನಿಕ ವಸ್ತುಗಳ ಸೇವನೆಯಿಂದ ದೃಷ್ಟಿಪಟದ ನರಕಣಗಳು ಶಿಥಿಲಗೊಂಡು ಬಣ್ಣಗುರುಡನ್ನುಂಟುಮಾಡಬಲ್ಲವು.
(ಎಸ್.ಟಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ